ನವಯುಗ -
ಉಡುಪಿಯಿಂದ ಪ್ರಕಟವಾಗುತ್ತಿರುವ ಕನ್ನಡ ಸಾಪ್ತಾಹಿಕ. ಸಂಪಾದಕರು ಕೆ. ಸಾಧನ ಕುಮಾರ್ ಶೆಟ್ಟಿ.

ನವಯುಗವನ್ನು ಆರಂಭಿಸಿದವರು ಎ.ಬಿ. ಶೆಟ್ಟಿ ಅವರು. ಇದು ಆರಂಭವಾದ್ದು ಮಂಗಳೂರಿನಲ್ಲಿ, 1921ರಲ್ಲಿ. ಸುಮಾರು 15 ವರ್ಷಗಳ ಅನಂತರ ಇದರ ಕಛೇರಿ ಉಡುಪಿಗೆ ವರ್ಗವಾಯಿತು. 1974ರ ಮೇ 31ರವರೆಗೆ ಕೆ.ಹೊನ್ನಯ್ಯ ಶೆಟ್ಟಿ ಅವರು ಇದರ ಸಂಪಾದಕರಾಗಿದ್ದರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ವೇಳೆಯಲ್ಲಿ ಜನಾಭಿಪ್ರಾಯವನ್ನು ರೂಪಿಸುವ ಉದ್ದೇಶದಿಂದ ಈ ಪತ್ರಿಕೆ ಆರಂಭವಾಯಿತು. ಒಂದು ದೇಶ ಒಂದು ಜನ ಎಂಬ ಮನೋಧರ್ಮವನ್ನು ಜನರಲ್ಲಿ ಮೂಡಿಸಲು ಪ್ರಯತ್ನಿಸಿ, ಕನ್ನಡ ಪತ್ರಿಕಾ ಪ್ರಪಂಚಕ್ಕೆ ಪ್ರತಿಕೂಲ ವಾತಾವರಣವಿದ್ದಾಗಲೂ ನಿಷ್ಠೆಯಿಂದ ಇದು ಮುಂದುವರಿಯಿತು. ಗ್ರಾಮಾಂತರ ಪ್ರದೇಶಗಳ ಜನತೆಗೆ ಉಪಯುಕ್ತವಾಗುವ ವಿಚಾರಗಳಿಗೆ ಪ್ರಾಶಸ್ತ್ರ್ಯ ನೀಡುವ ಈ ಪತ್ರಿಕೆಯ ಕೆಲವು ಸ್ಥಿರಶೀರ್ಷಿಕೆಗಳು ಇವು : ಸಂಪಾದಕೀಯ, ಚಿಕ್ಕ ಕಥೆ, ಗೇಹ ರಾಜ್ಯದಲ್ಲಿ, ಕವಲುದಾರಿ, ಕೆಂಪುದೀಪ, ಚಾರುಚಯನ ಮತ್ತು ಪುಸ್ತಕ ಪರಿಚಯ. ರಾಜಕೀಯ, ಸಾಂಸ್ಕøತಿಕ, ಸಾಹಿತ್ಯಕ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಲೇಖನಗಳೂ ಇದರಲ್ಲಿ ಪ್ರಕಟವಾಗುತ್ತವೆ.

ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ಇದು ವಿಶೇಷ ಸಂಚಿಕೆಗಳನ್ನು ಪ್ರಕಟಿಸುತ್ತ ಬಂದಿದೆ. ವರ್ಷಕ್ಕೊಮ್ಮೆ ವಾಣಿಜ್ಯ ಮತ್ತು ಉದ್ಯಮ ವಿಶೇಷಾಂಕವಳನ್ನೂ ಪ್ರಕಟಿಸಿದೆ. ಹಿಂದೆ ದಸರಾ, ದೀಪಾವಳಿ, ಪರ್ಯಾಯೋತ್ಸವ ಸಂದರ್ಭಗಳಲ್ಲೂ ಇದು ವಿಶೇಷ ಸಂಚಿಕೆಗಳನ್ನು ಪ್ರಕಟಿಸುತ್ತಿತ್ತು.				
	(ಎಚ್.ಜಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ